ಮೈಕೆಲೆಂಜೆಲೋ	
1475-1564. ಯುರೋಪಿನ ಬೌದ್ಧಿಕ ಕ್ರಾಂತಿಯ ಕಾಲದಲ್ಲಿ ಇಟಲಿಯಲ್ಲಿ ಆಗಿಹೋದ ಚಿತ್ರಕಾರ, ಶಿಲ್ಪಿ, ವಾಸ್ತುಶಿಲ್ಪಿ ಮತ್ತು ಕವಿ. ಬರೋಕ್ ಕಲಾಪದ್ಧತಿಯ ಆದ್ಯ ಪ್ರವರ್ತಕ. ಈತ 6 ಮಾರ್ಚ್ 1475ರಲ್ಲಿ ಇಟಲಿಯ ಪ್ರಸಿದ್ಧ ಫ್ಲಾರೆನ್ಸ್ ಕುಟುಂಬದಲ್ಲಿ ಕಾಪ್ರೆಸ್ ಎಂಬ ಹಳ್ಳಿಯಲ್ಲಿ ಜನಿಸಿದ. ಇವನ ತಂದೆ ಲುಡೊಂಕೋ ಚಾನಾರವಿಯ ಕಾಪ್ರೆಸ್ ನಗರದ ಆಡಳಿತಾಧಿಕಾರಿಯಾಗಿದ್ದ. ಚಿಕ್ಕಂದಿನಲ್ಲಿ ಮಗನ ಕಲಾಭಿರುಚಿಯನ್ನು ಗುರುತಿಸಿದ ಲುಡೊಂಕೋ ಇವನನ್ನು ಫ್ಲಾರೆನ್ಸಿನ ಪ್ರಸಿದ್ಧ ಚಿತ್ರಕಾರ ಡೊಮೆನಿಕೊ ಗಿರ್ಲಂಡಜೋ ಎಂಬವನ ಬಳಿ ಶಿಷ್ಯವೃತ್ತಿಗೆ ಕಳಿಸಿದ. ಆದರೆ ಮೈಕೆಲನಿಗೆ ಚಿತ್ರಕಲೆಗಿಂತ ಶಿಲ್ಪಕಲೆಯಲ್ಲಿ ಹೆಚ್ಚು ಆಸಕ್ತಿ. ಅದರಲ್ಲಿಯೂ ಡೊನಾಟೆಲ್ಲೊನ ಶಿಲ್ಪಕಲೆ ಈತನ ಮೇಲೆ ಗಾಢವಾದ ಪ್ರಭಾವ ಬೀರಿತು. ಡೊನಾಟೆಲ್ಲೊನ ಶಿಷ್ಯನೊಬ್ಬನ ಬಳಿ ಅಪ್ರೆಂಟಿಸ್ ಶಿಲ್ಪಿಯಾಗಿ ತನ್ನ ಕಲಾಜೀವನವನ್ನು ಆರಂಭಿಸಿದ. ಅನಂತರ ಲೊರೆನ್ಜೊ ಮೆಡಸಿ (ನೋಡಿ- ಮೆಡಿಸಿ,-ಲೊರೆನ್ಜೊ) ಎಂಬ ಶ್ರೀಮಂತನ ಆಶ್ರಮದಲ್ಲಿದ್ದ ಗಿಯೊವನಿ ಬರ್ಟೊಲ್ಡೋ (1440-91) ಎಂಬ ಶಿಲ್ಪಿಯ ಶಿಷ್ಯನಾಗಿ ಮೆಡಿಸಿಯನ್ನು ಸೇರಿದ. ಹೀಗಾಗಿ ಇವನಿಗೆ ಲೊರೆನ್ಜೋನ ಆಶ್ರಯ, ಬರ್ಟೊಲ್ಡೋನ ಮಾರ್ಗದರ್ಶನದ ಜೊತೆಗೆ ಪ್ಲೇಟೊ ಅಕಾಡೆಮಿಯ ಸಾಮೀಪ್ಯ ದೊರೆತು ಇವನ ಕಲಾಜೀವನ ರೂಪಿತಗೊಂಡಿತು. 1494ರಲ್ಲಿ ಮೆಡಿಸಿ ಕುಟುಂಬದ ಅಧಿಕಾರದ ಪತನದ ಅನಂತರ ಈತ ಬೊಲೋನ ನಗರದಲ್ಲಿ ನಿರ್ಮಿತಗೊಳ್ಳುತ್ತಿದ್ದ ಸ್ಯಾನ್ ಪೆಟ್ರೊನಿಯೊ ಚರ್ಚಿನ ಶಿಲ್ಪ ಆಲಂಕರಣ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳುವಂತಾಯಿತು. ಅಲ್ಲಿದ್ದಾಗ ಇವನಿಗೆ ಜಕೋಪೋ ಡೆಲ್ಲಾ ಕ್ವೆರ್ಷಿಯಾನ ಶಿಲ್ಪಗಳನ್ನು ಅಧ್ಯಯನ ಮಾಡುವ ಅವಕಾಶ ಸಿಕ್ಕಿತು. ಹೀಗೆ ತಾರುಣ್ಯದಲ್ಲಿ ಒದಗಿಬಂದ ಈ ಕಲಾನುಭವಗಳು ಬಹಳಷ್ಟು ಪ್ರಭಾವ ಬೀರಿದವು. ಈತ ಫ್ಲಾರೆನ್ಸಿನಲ್ಲಿ ಕೆಲವು ವರ್ಷಗಳನ್ನು ಕಳೆದ (1501-05). ಆಗ ಪ್ರಸಿದ್ಧ ಕಲಾಕಾರ ಲಿಯನರ್ಡೊ ಡ ವಿಂಚಿಯನ್ನು ಭೇಟಿಯಾದ; ಅವನ ಕಲಾನೈಪುಣ್ಯದಿಂದಲೂ ಸಾಕಷ್ಟು ಪ್ರಭಾವಿತನಾದ. 

ಮೈಕಲೆಂಜೆಲೋನ ಆರಂಭದ ಗಮನಾರ್ಹ ಶಿಲ್ಪಗಳೆಂದರೆ ಮೆಡೋನಾ ಆಫ್ ದಿ ಸ್ಟೇರ್ಸ್, ಸೇಟಾರ್ಯ, ಸೆನಿಟಾರ್ ಆಕ್ರಮಣದಿಂದ ರಕ್ಷಿತಳಾದ ಯುವತಿ, ಇವುಗಳಲ್ಲಿ ಮೆಡೋನಾ ಮುಖ್ಯವಾದವು. ಇವನಿಗಿಂತ ಹಿಂದಿನ ಮತ್ತು ಇವನ ಸಮಕಾಲೀನ ಶಿಲ್ಪಿಗಳು ತಾಯಿಯ ತೊಡೆಗಳ ಮೇಲೆ ಮಲಗಿರುವಂತಹ ಮಗು ಯೇಸುವಿನ ದೇಹವನ್ನು ಕಡೆದಿದ್ದರೆ, ಈತ ಕುಳಿತಿರುವ ಮೆಡೋನಾ ಕಾಲುಗಳ ನಡುವೆ ನಿಂತಿರುವಂತೆ ಬಾಲ ಯೇಸುವನ್ನು ಕಂಡರಿಸಿದ. ಮಗುವಿನ ದೇಹವನ್ನು ಬಾಗದಂತೆ ನಿರೂಪಿಸುತ್ತ, ಬಲಗೈ ತಾಯಿಯ ಎಡತೋಳನ್ನು ಹಿಡಿದುಕೊಂಡಂತೆ ತೋರಿಸಿ, ಹಾಗೆಯೇ ಆಕೆಯ ಶಿರೋಭಾಗ ಮತ್ತು ಬಲತೋಳಿನವರೆಗೂ ರೇಖಾವೃತ್ತವನ್ನು ಮುಂದುವರೆಸಿದ ಭಾವನೆಯನ್ನು ಸೃಷ್ಟಿಸಿದ್ದಾನೆ. ಇದರಿಂದ ಶಿಲ್ಪಿಯ ವಿನೂತನ ವಿನ್ಯಾಸ ಮತ್ತು ಸ್ವಂತಿಕೆ ಎದ್ದು ಕಾಣುವಂತಾಗಿದೆ. ತಾಯಿ ಮತ್ತು ಮಗು ಶಿಲ್ಪಗಳೆರಡರಲ್ಲೂ ಅಂತರ್ಮುಖಿ ಭಾವವನ್ನು ಸೂಚಿಸಲಾಗಿದೆ.
ಇವನ ಬದುಕಿನ ಮಧ್ಯಕಾಲದ ಶಿಲ್ಪಗಳಲ್ಲಿ ಪ್ರಮುಖವಾದುವೆಂದರೆ ನಿದ್ರಿಸುತ್ತಿರುವ ಮಹಿಳೆ, ಮನ್ಮಥ (ಕ್ಯುಪಿಡ್), ಬ್ಯಾಕಸ್, ಮೋಸೆಸ್, ಡೇವಿಡ್ ಮುಂತಾದವು. ಇವುಗಳಲ್ಲಿ ಮೋಸೆಸ್‍ನ ಶಿಲ್ಪ ಅದ್ಭುತವಾದವು. ರೋಮ್ ನಗರದ ಸಂತಪೀಟರ್ ಮಂದಿರದಲ್ಲಿ ಅಸೀನ ಭಂಗಿಯಲ್ಲಿರುವ ಈ ಮೂರ್ತಿ ಸುಮಾರು ಎಂಟು ಅಡಿ ಎತ್ತರವಿದೆ. ಪೀಠದ ಮೇಲೆ ಮುಖ ತಿರುವಿ ಕುಳಿತ ತುಂಬುದೇಹ, ನಾಭಿಯತನಕ ಇಳಿದುಬಂದ ಗಡ್ಡಮೀಸೆಗಳಿಂದ ಅಲಂಕೃತವಾದ ಗಂಭೀರ ಮುಖಭಾವ, ಮುಪ್ಪಡರಿದ್ದರೂ ಸತ್ವಯುತ ಭಂಗಿ, ತೀಕ್ಷ್ಣ ನೋಟದ ಕ್ರೋಧಭಾವ - ಇವುಗಳಿಂದ ಈ ಶಿಲ್ಪ ಇವನ ಶಿಲ್ಪಗಳಲ್ಲೇ ವಿಶಿಷ್ಟವಾದುದಾಗಿದೆ. ಬೆಲ್ಜಿಯಂನ ವರ್ತಕರಿಗಾಗಿ ನಿರ್ಮಿಸಿದ ಹದಿನೈದು ಅಡಿ ಎತ್ತರದ ಡೇವಿಡ್ ಶಿಲ್ಪದಲ್ಲಿ ಮೈಕೆಲನ ಜೀವನದರ್ಶನ, ಕಲಾನೈಪುಣ್ಯ, ರಸಪ್ರಜ್ಞೆ ಮತ್ತು ತಾಂತ್ರಿಕತೆಗಳು ಪರಿಪಕ್ವವಾಗಿ ನಿರೂಪಿತವಾಗಿವೆಯೆಂದು ಭಾವಿಸಲಾಗಿದೆ. ಯುರೋಪಿನ ಶಿಲ್ಪಕಲೆಯಲ್ಲಿ ಇದೊಂದು ಅದ್ವಿತೀಯ ನಿರ್ಮಾಣವೆಂದರೆ ಅತಿಶಯೋಕ್ತಿಯಲ್ಲ. ದೈತ್ಯ ಗಾಲಿಯಥನನ್ನು ಮರ್ದನ ಮಾಡಿದ ಅಸಮ ಸಾಹಸಿ ಡೇವಿಡ್‍ನ ಅಂತಸ್ಸತ್ತ್ವ, ಧೀರೋದಾತ್ತ ಸಹಜ ನಿಲುವು, ಆಂತರಿಕ ತುಮುಲದ ಭಾವಾಭಿವ್ಯಕ್ತಿ- ಇವು ಈ ಶಿಲ್ಪದಲ್ಲಿ ಜೀವಂತವಾಗಿವೆ. 

ಮೈಕೆಲನ ಪರಿಪಕ್ವತೆಯ ಪ್ರತೀಕವಾಗಿರುವ, ಅಂತೆಯೇ ಬಹಳಷ್ಟು ವಿಮರ್ಶೆ-ಚರ್ಚೆಗಳ ವಸ್ತುವಾಗಿರುವ ಕೃತಿ ಪಿಯೆಟಾ (ಕರುಣಾಮೂರ್ತಿ). ಈ ಶಿಲ್ಪ ಇವನನ್ನು ವಿಶ್ವದ ಒಬ್ಬ ಪ್ರಮುಖ ಕಲಾಚಾರ್ಯನನ್ನಾಗಿ ಮಾಡಿದೆ. ಇದೇ ವಸ್ತುವನ್ನು ಇತರ ಅನೇಕರು ಶಿಲ್ಪ ನಿರ್ಮಾಣಕ್ಕೆ ಬಳಸಿಕೊಂಡಿದ್ದರೂ ಇದೊಂದು ವಿಶಿಷ್ಟ ಕೃತಿಯಾಗಿದೆ. ಅಮೃತಶಿಲೆಯಲ್ಲಿ ಕಡೆದ ಈ ಕೃತಿಯಲ್ಲಿ ಮಗನನ್ನು ತೊಡೆಗಳ ಮೇಲೆ ಇಟ್ಟುಕೊಂಡಿರುವ ಮೇರಿ ತಾರುಣ್ಯದ ಚೆಲುವನ್ನು ಪ್ರತಿಬಿಂಬಿಸುತ್ತಾಳೆ. ಬಾಲಯೇಸು ಸತ್ತಿದ್ದರೂ ಮುಖದಲ್ಲಿ ಜೀವಂತವಾಗಿ ನಿದ್ರಿಸುತ್ತಿರುವ ಕಳೆಯಿದೆ. ಮಗನಿಗಿಂತಲೂ ತಾಯಿಯೇ ಚಿಕ್ಕ ವಯಸ್ಸಿನವಳೇನೋ ಎಂಬ ಭಾವನೆಯುಂಟಾಗುವಂತೆ ಮೇರಿಯ ಚೆಲುವು ಕಂಡರಣೆಗೊಂಡಿದೆ. ಈ ಅಂಶ ಶಿಲ್ಪದ ನ್ಯೂನತೆಯೆಂದೇ ಹೇಳಬಹುದಾದರೂ ಅದರ ಉತ್ಕøಷ್ಟ ಕಲಾತ್ಮಕತೆ ಮತ್ತು ವಿನ್ಯಾಸ ಈ ಲೋಪವನ್ನು ಮುಚ್ಚಿಹಾಕುವುದೆಂದು ಹಲವು ವಿಮರ್ಶಕರ ಅಭಿಪ್ರಾಯ. ತಾಯಿ ತನ್ನ ಮಗುವಿನ ಸಾವಿಗಾಗಿ ಪಡುತ್ತಿರುವ ದುಃಖ, ಅನುಕಂಪ ಹೃದಯಂಗಮವಾಗಿ ಇಲ್ಲಿ ರೂಪಿತವಾಗಿದೆ. ಇವಲ್ಲದೆ ಈತನ ಹಲವಾರು ಸ್ಮಾರಕ ಶಿಲ್ಪಗಳು ಚರ್ಚುಗಳಲ್ಲಿ ಮತ್ತು ಇನ್ನಿತರ ಪ್ರಮುಖ ಸ್ಥಳಗಳಲ್ಲಿದ್ದು ಇವನ ಕಲಾ ಪ್ರೌಢಿಮೆಯನ್ನು ಸೂಸುತ್ತವೆ. ಇವುಗಳಲ್ಲಿ ಮುಖ್ಯವಾಗಿ ಲೊರೆನ್ಜೊ ಡ ಮೆಡಿಸಿ ಮತ್ತು ಗ್ವಿಲಿಯಾನೋ ಶಿಲ್ಪಗಳನ್ನು ಹೆಸರಿಸಬಹುದಾಗಿದೆ. 

ಮೈಕೆಲೆಂಜೆಲೋ ಮಹಾನ್ ಶಿಲ್ಪಿಯಾಗಿದ್ದಂತೆ ಮಹಾನ್ ಚಿತ್ರಕಾರನೂ ಆಗಿದ್ದ. ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿ ಇಲ್ಲದಿದ್ದರೂ ಸಿಸ್ಪೈನ್ ಚಾವಣಿಯ ಒಳಭಾಗವನ್ನು ಹಲವು ಅಂಕಣಗಳನ್ನಾಗಿ ವಿಭಜಿಸಿ, ಕ್ರೈಸ್ತಧರ್ಮ ಸಂಬಂಧಿಸಿದ ವಸ್ತುಗಳನ್ನು ಆಯ್ದುಕೊಂಡು ವೈವಿಧ್ಯಮಯ ವರ್ಣಚಿತ್ರಗಳನ್ನು ರಚಿಸಿದ. ಇವನ ಚಿತ್ರಗಳು ಮೂರು ಆಯಾಮ (ತ್ರೀ ಡೈಮೆನ್‍ಷನ್) ಭಾವನೆಯನ್ನು ಉಂಟುಮಾಡುತ್ತಿದ್ದು ಶಿಲ್ಪಗಳೆನೋ ಎಂಬ ಭ್ರಮೆಯನ್ನು ಮೂಡಿಸುತ್ತವೆಂದು ಪ್ರಶಂಸಿಸಲಾಗಿದೆ. ಇಟಲಿಯ ರೋಮ್ ನಗರದ ವ್ಯಾಟ್‍ನಲ್ಲಿರುವ ಸಿಸ್ಟೈನ್ ಮಂದಿರದ ಚಾವಣಿಯಲ್ಲಿ ಚಿತ್ರಿಸಿರುವ ಚಿತ್ರಗಳಲ್ಲಿ ಗುಣವನ್ನು ಕಾಣಬಹುದು. ಶಕ್ತಿಪೂರ್ಣವಾದರೂ ಮುಗ್ಧನಂತಿರುವ ಹಾರುತ್ತಿರುವ ದೇವರು ತನ್ನೊಂದು ಬೆರಳಿನಿಂದ ಸ್ಪರ್ಶಿಸುವ ಮೂಲಕ ಆತ ರಕ್ಷಣೆಯನ್ನು ಸೂಚಿಸುತ್ತಿದ್ದಾನೆ. ಮುಂದಿನ ಚಿತ್ರದಲ್ಲಿ ಅದೇ ದೇವ ಆದಮನನ್ನು ಮೋಹಜಾಲಕ್ಕೆ ಸಿಕ್ಕಿಸುವ ಈವಳನ್ನು ಮತ್ತೊಂದು ಕೈಬೆರಳಿನಿಂದ ಸ್ಪರ್ಶಿಸುತ್ತ, ಅವರಿಬ್ಬರ ಮುಂದಣ ಸಂಬಂಧವನ್ನು ಸೂಚಿಸಿದ್ದಾನೆ. ದೇವರನ್ನು ನೋಡುತ್ತಿರುವ ಆದಮನ ದೃಷ್ಟಿ ಚಲಿಸಿ ಹರಿದು ಈವಳತ್ತ ಕೇಂದ್ರೀಕೃತವಾಗಿದೆ. ಮತ್ತೊಂದು ಚೌಕಟ್ಟಿನಲ್ಲಿ ಈಡನ್ ತೋಟದಲ್ಲಿ ಆದಮ್ ಮತ್ತು ಈವ್ ಇವರಿಬ್ಬರ ಸಂಗಮದ ಚಿತ್ರವಿದೆ. ಈ ಎರಡು ಚಿತ್ರಗಳ ಮಧ್ಯೆ ವೃಕ್ಷವೊಂದು ಇದ್ದು ಚಿತ್ರಗಳನ್ನು ಬೇರ್ಪಡಿಸುತ್ತದೆ. ಈ ಚಿತ್ರಗಳಲ್ಲಿ ಮಾನವ ಅಂಗವಿನ್ಯಾಸ, ಕಾರ್ಯಗಳನ್ನು ಮನೋಜ್ಞವಾಗಿ ನಿರೂಪಿಸಲಾಗಿದೆ. 

ಇವನ ಚಿತ್ರಗಳಲ್ಲಿ ಜಗದ್ವಿಖ್ಯಾತವಾದ ಮತ್ತೊಂದು ಚಿತ್ರ- ಅಂತಿಮ ತೀರ್ಪು (ಲಾಸ್ಟ್ ಜಡ್ಜ್‍ಮೆಂಟ್, 1534-41). ಪೋಪ್ ಜೂಲಿಯಸ್‍ನ ಅನಂತರ ಗದ್ದುಗೆಯನ್ನೇರಿದ ಮೂರನೆಯ ಪೋಪ್ ಪಾಲನ ಆದೇಶದಂತೆ ರಚಿಸಿದ ಹಲವು ಚಿತ್ರಗಳಲ್ಲಿ - ಸಂತಪೀಟರನ ಉತ್ಕ್ರಮಣ, ಸಂತಪಾಲನ ಮನಃಪರಿವರ್ತನೆ, ಹಗಲುರಾತ್ರಿಗಳು, ಸೂರ್ಯಚಂದ್ರ ನಕ್ಷತ್ರಗಳು, ಪ್ರಳಯ ಮುಂತಾದ ಸೃಷ್ಟಿ ನಿರೂಪಣಾ ಚಿತ್ರಗಳ ನಡುವೆ ಈ `ಅಂತಿಮ ತೀರ್ಪು ಅಮೋಘವಾದುದೇ. ಮಾನವತೆಯ ಕೃತಕೃತ್ಯತೆಯನ್ನು ಈ ಚಿತ್ರ ಭಾವನಾತ್ಮಕವಾಗಿ ನಿರೂಪಿಸುತ್ತದೆ. ತನ್ನ ಇಳಿವಯಸ್ಸಿನಲ್ಲಿ ರೂಪಿಸಿದ ಈ ಚಿತ್ರ ಸಮೂಹ ಮೈಕೆಲನ ಜೀವನ ದೃಷ್ಟಿಯನ್ನೂ ಆಧ್ಯಾತ್ಮಿಕ ಪರಿಪಕ್ವತೆಯನ್ನೂ ಪ್ರತಿಬಿಂಬಿಸುತ್ತದೆಯೆಂದು ಹೇಳಲಾಗಿದೆ.

ಮೈಕೆಲೆಂಜೆಲೋನ ವಾಸ್ತು ವಿನ್ಯಾಸಗಳು ಸಹ ಗಮನಾರ್ಹ ಕೊಡುಗೆಗಳು. ರೋಮ್ ನಗರದ ಸಂತಪೀಟರನ ಮಂದಿರದ ವಿನ್ಯಾಸವನ್ನು ಮೊದಲಿಗೆ ಬ್ರಮಾಂಟೆ ರಾಫೆಲ್ ಮುಂತಾದವರು ರೂಪಿಸಿದ್ದರೂ ಮೂರನೆಯ ಪೋಪ್ ಪಾಲನ (1534-49) ಆದೇಶದಂತೆ ಈತನ ಉಸ್ತುವಾರಿಗೆ ವಹಿಸಲಾಯಿತು. 1546ರಿಂದ ತನ್ನ ಮರಣದವರೆಗೂ (1584) ಆ ಕಾರ್ಯನಿರ್ವಹಿಸಿದ ಈತ ಮೂಲ ವಿನ್ಯಾಸದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದ. ನಿರ್ಮಾಣಕಾರ್ಯ ಮುಗಿಯುವ ಮೊದಲೇ ತೀರಿಕೊಂಡಿದ್ದರಿಂದ ಮುಂದೆ ಅದರ ನಕಾಶೆಯಲ್ಲಿ ಕೆಲ ಬದಲಾವಣೆಗಳು ಆದರೂ ಮೈಕೆಲನ ವಾಸ್ತು ವೈಶಿಷ್ಟ್ಯವನ್ನು ಈ ಕಟ್ಟಡದಲ್ಲಿ ಕಾಣಬಹುದಾಗಿದೆ. ಮೈಕೆಲನ ಮತ್ತೊಂದು ವಾಸ್ತು ವಿನ್ಯಾಸವೆಂದರೆ ಉನ್ನತ ಬೌದ್ಧಿಕ ಕ್ರಾಂತಿಯುಗದ ಪ್ರತೀಕಗಳಾದ `ಅರಮನೆ ವಿನ್ಯಾಸಗಳು. ಇವುಗಳಲ್ಲಿ ಪ್ರಮುಖವಾದುವೆಂದರೆ ರೋಮ್ ನಗರದಲ್ಲಿರುವ ಫಾರ್ನೆಸಿ ಭವನ. ಆ ಕಟ್ಟಡದ ಮೊದಲ ವಿನ್ಯಾಸಕಾರ ಆಂಟೊನಿಯೊ ಡ ಸಂಗಲ್ಲೊ; ಸುಧಾರಣೆಗೊಳಿಸಿದವನು ಈತ. ವಿಶಾಲ ಪ್ರಾಂಗಣದಲ್ಲಿ ನಡುವೆ ನಿಂತ ಆಯಾಕಾರದ ಬಹು ಅಂತಸ್ತಿನ ಕಮಾನುಗೂಡುಗಳನ್ನೊಳಗೊಂಡ ಭವನದ ಹೊರಭಾಗ ಶ್ರೀಮಂತಿಕೆಯನ್ನು ಸೂಸುವ ಭವ್ಯ ನಿರ್ಮಾಣವಾಗಿದೆ. ಅದರ ವಾತಾಯನಗಳು ಭಿತ್ತಿಯಲ್ಲಿ ಅಡಕವಾಗಿರದೆ ಮುನ್‍ಚಾಚಿದ್ದು, ವಾತಾಯನಗಳ ಮೇಲಿನ ಸೂರುಗಳು ಕಲಾತ್ಮಕವಾಗಿದ್ದು 16ನೆಯ ಶತಮಾನದ ಬರೋಕ್ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಭಿತ್ತಿಯ ಪ್ರತಿ ಅಂಕಣವು ಪ್ರತ್ಯೇಕ ಅಂಗದಂತೆ ಗೋಚರಿಸುತ್ತದೆ. ಒಟ್ಟಿನಲ್ಲಿ ಈ ನಿರ್ಮಾಣಗಳಲ್ಲಿ ವೈವಿಧ್ಯತೆ ಮತ್ತು ಭವ್ಯತೆಗಳು ಎದ್ದು ಕಾಣುವಂತಿದ್ದು ವಾಸ್ತು ಶಿಲ್ಪಿಯ ಪ್ರೌಢಿಮೆಗೆ ಸಾಕ್ಷಿಯಾಗಿದೆ.

ಇವನ ಕಲಾಕೃತಿಗಳು ಅಭೂತಪೂರ್ವವಾಗಿರುವಂತೆಯೇ ಇವನ ಜೀವನ ದೃಷ್ಟಿ ಡಾಂಟೆಯಂಥ ಕವಿ, ಪ್ಲೇಟೋನಂಥ ದಾರ್ಶನಿಕರ ವಾಙ್ಮಯಗಳಿಂದ ದೀಪ್ತವಾಗಿತ್ತು. ಪರಂಪರಾಗತ ಶಾಸ್ತ್ರೀಯ ಅಧ್ಯಯನದೊಂದಿಗೆ ಆಧುನಿಕತೆಯೂ ಸಮ್ಮಿಶ್ರವಾಗಿ ಇವನ ಕೃತಿಗಳಿಗೆ ವೈಶಿಷ್ಟ್ಯ ದೊರಕಿಕೊಂಡಿದೆ. ಇವನಿಗೆ ಶರೀರ ಶಾಸ್ತ್ರದಲ್ಲಿದ್ದ ಅಗಾಧ e್ಞÁನದಿಂದಾಗಿ ಪ್ರಮಾಣಬದ್ಧ ಪ್ರಾಣಿ, ಪಕ್ಷಿ ಮತ್ತು ಮಾನವ ದೇಹ ನಿರೂಪಣೆಯನ್ನು ಮಾಡಲು ಸಾಧ್ಯವಾಯಿತು. ಈತ ತನ್ನ ಹಿಂದಿನ ಮತ್ತು ಸಮಕಾಲೀನ ಕಲಾವಿದರ ಕೃತಿಗಳನ್ನು ಮಾದರಿಯನ್ನಾಗಿ ಆಯ್ದುಕೊಂಡರೂ ನಿರೂಪಣೆಯಲ್ಲಿ ಸ್ವಂತಿಕೆಯನ್ನೂ ಹೊಸತನ್ನೂ ಸಾಧಿಸುವುದರಲ್ಲಿ ಸಿದ್ಧಹಸ್ತನೆನಿಸಿದ. ಇವನ ಜೀವಿತಾವಧಿಯಲ್ಲೇ ಇವನ ಬಗ್ಗೆ ಬರೆದ ವಿಮರ್ಶಕ ವಸಾರಿ ಇವನ ಸರಳ ಜೀವನವನ್ನೂ ಕಾರ್ಯನಿಷ್ಠೆಯನ್ನೂ ಮುಕ್ತವಾಗಿ ಪ್ರಶಂಸಿಸಿದ್ದಾನೆ.
 								 (ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ